Sunday, October 10, 2010

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು |ಪ|
ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ |೧|ಯಾವ|
ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ |೨|ಯಾವ|
ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ |೩|ಯಾವ|
                                                        
                                                               

                                                                                           ಸಾಹಿತ್ಯ : ಗೋಪಾಲ ಕೃಷ್ಣ ಅಡಿಗ
                                                                                           ಸಂಗೀತ : ಮೈಸೂರು ಅನಂತಸ್ವಾಮಿ


                                         

Friday, October 8, 2010

ಅಮ್ಮ, ನಿನ್ನ ಎದೆಯಾಳದಲ್ಲಿ

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ
                                   KAVI....

ಸ್ನೇಹ ಮಾಡಬೇಕಿಂತವಳ!

 ಸ್ನೇಹ ಮಾಡಬೇಕಿಂತವಳ!
-----------------------

ಸ್ನೇಹ ಮಾಡಬೇಕಿಂಥವಳ! - ಒಳ್ಳೇ
ಮೋಹದಿಂದಲಿ ಬಂದು - ಕೂಡುವಂಥವಳ

ಚಂದ್ರಗಾವಿ ಶೀರೀನುಟ್ಟು - ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು - ನಾಲ್ಕು
ಮಂದಿಯೊಳು ಬಂದು ನಾಚುವಳೆಷ್ಟು!

ಅರಗಿಳಿ ಸಮ ಇವಳ ನುಡಿಯು - ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು - ಒಳ್ಳೇ
ಬಳುಬಳುಕುವ ನಡುವು ತಳಿರಡಿಯು.

ಮುಕ್ತ ಕಾಮಿನಿ ಎನ್ನ ಕಾಡಿ - ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ - ದೇವ
ಶಿಶುನಾಳಾಧೀಶನ ಪಾದಕೆ ದೂಡಿ!

-ಸಂತ ಶಿಶುನಾಳ ಶರೀಫ